Skip links

ತುಂಬೆ

Scientific Name: Leucas aspera

        ನೀರು ನಿಲ್ಲದ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುವ ತುಂಬೆ ಕಲ್ಲಿನ ಎಡೆಗಳಿಂದಲೂ ಹುಟ್ಟಿ ಬೆಳೆಯುತ್ತದೆ. ತುಳುವಿನಲ್ಲಿ ಅಡಿಕೆ ಹಾಳೆಯಿಂದ ತಯಾರಿಸುವ “ಕಿಳ್ಳಿ” ಯಂತೆ ಅಥವಾ ಸಣ್ಣ ಪಾತ್ರೆಯಂತೆ ಇದರ ಹೂಗಳು ಕಾಣುವುದರಿಂದ “ದ್ರೋಣ ಪುಷ್ಪಿ” ಎಂದು ಕರೆಯುತ್ತಾರೆ. ಶಿವಲಿಂಗ ಇರುವ ದ್ರೋಣ ಪೀಠದಂತೆ ಕಾಣುವುದರಿಂದಲೂ ಈ ಹೆಸರು ಬಂದಿರಬಹುದು. ಶಿವನಿಗೆ ಇಷ್ಟವಾದ ಎಂಟು ಹೂಗಳಲ್ಲಿ ತುಂಬೆ ಹೂವು ಒಂದು. ಪರಶಿನಕಡವು ಮುತ್ತಪ್ಪ ದೈವದ ಆರಾಧನೆಗೆ ಇದರ ಹೂವನ್ನೇ ಕಿರೀಟದಲ್ಲಿ ವಿಶೇಷವಾಗಿ ಬಳಸಿ ಪ್ರಸಾದವಾಗಿ ಅದನ್ನೇ ಕೊಡುತ್ತಾರೆ.

ಒಂದರಿಂದ ಮೂರು ಅಡಿ ಎತ್ತರ ಬೆಳೆಯುವ ತುಂಬೆಯ ಕಾಂಡ ದೊರಗಾಗಿ ಚೌಕಾಕಾರವಾಗಿರುತ್ತದೆ, ಸಪೂರ ನೀಳವಾಗಿ ನಯವಾದ ರೋಮಗಳಿಂದ ಕೂಡಿದ ಎಲೆಗಳು, ವೃತ್ತಾಕಾರದಲ್ಲಿ ಗುಚ್ಚವಾಗಿ ಬೆಳೆದ ಪುಷ್ಪ ಪಾತ್ರೆಯಿಂದ ಸಣ್ಣ ಕಪ್‍ನಂತಹ ಹೊರಚಾಚಿರುವ ಶ್ವೇತವರ್ಣದ ಸುಂದರ ಹೂಗಳು, ಹೂಗುಚ್ಚದ ಅಗ್ರಭಾಗದಲ್ಲಿ ಹೆಚ್ಚಾಗಿ ಎರಡು ಎಲೆಗಳು ಹೊರಬಂದಿರುತ್ತದೆ. ಅಜೀರ್ಣ, ತಲೆನೋವು, ಗಂಟುನೋವು, ಕಫ, ಕೆಮ್ಮುಗಳಲ್ಲಿ ಇದರ ಹೂ, ಎಲೆ, ಕಾಂಡ, ಬೇರುಗಳನ್ನು ಬಳಸುತ್ತಾರೆ.

ಜ್ವರ:

ಮಂದ ಜ್ವರದಲ್ಲಿ ಅಥವಾ ಕಫ ಇರುವ ಜ್ವರದಲ್ಲಿ ಇದರ ಎಲೆಯ 1-2 ಚಮಚ ರಸಕ್ಕೆ 100-125ಮಿ.ಗ್ರಾಂ ಟಂಕಣ ಭಸ್ಮ ಸೇರಿಸಿ ಕುಡಿದರೆ ಕಡಿಮೆಯಾಗುತ್ತದೆ. ಅಥವಾ ಎಲೆಯನ್ನು ಕುದಿಸಿ ಕಷಾಯ ಮಾಡಿ ಸೋಸಿ ಕಾಲು ಚಮಚ ಒಳ್ಳೆಮೆಣಸು ಪುಡಿ ಸೇರಿಸಿ 2-3 ಸಲ 2-3 ದಿನ ಕುಡಿಯುವುದರಿಂದಲೂ ಜ್ವರ ಕಡಿಮೆಯಾಗುವುದು.

ಅಜೀರ್ಣ:

ಹಸಿವು ಆಗದೇ ಇರುವಾಗ, ಹೊಟ್ಟೆ ಉಬ್ಬರಿಸಿರುವಾಗ, ಸಣ್ಣ ಪ್ರಮಾಣದ ಹೊಟ್ಟೆ ನೋವು ಇರುವಾಗ ಇದರ ಎಲೆ ರಸ ತೆಗೆದು ಸ್ವಲ್ಪ ಇಂದುಪ್ಪು ಸೇರಿಸಿ ಕುಡಿದರೆ ಕಡಿಮೆಯಾಗುವುದು. ಅಥವಾ ಇದರ ಬೇರನ್ನು ತೊಳೆದು ಜಜ್ಜಿ ಮಜ್ಜಿಗೆಗೆ ಹಾಕಿ ಕಲಸಿ ಸೋಸಿ ಇಂದುಪ್ಪು ಅಥವಾ ಹಿಪ್ಲಿ ಚೂರ್ಣ ಸೇರಿಸಿ ಕುಡಿಯುವುದರಿಂದಲೂ ಗುಣವಾಗುವುದು.

ಮೈಗ್ರೈನ್:

ತಲೆನೋವಿನ ವಿರಾಟ್ ರೂಪವೇ ಮೈಗ್ರೈನ್. ಇದರಿಂದ ಬಳಲುವವರು ದಿನಗಟ್ಟಲೆ, ವಾರಗಟ್ಟಲೆ ಕಷ್ಟ ಪಡುತ್ತಾರೆ. ವಾಂತಿ ಮಾಡಿಕೊಳ್ಳುತ್ತಾರೆ. ಬೆಳಕು ರಹಿತ, ಶಬ್ಧ ರಹಿತ ರೂಮಿನಲ್ಲಿ ಮಲಗಿ ತಲೆನೋವು ಸಹಿಸಿ ಕೊಳ್ಳುತ್ತಾರೆ. ಇಂತಹ ವಿಶೇಷ ತಲೆನೋವಿನಲ್ಲಿ ಅಲ್ಲದೆ ಕೆಲವರಿಗೆ ಸೂರ್ಯ ಏರಿದಂತೆ ತಲೆನೋವು ಜಾಸ್ತಿ ಆಗುತ್ತಾ ಹೋಗಿ ಸೂರ್ಯ ಇಳಿದಂತೆ ತಲೆನೋವು ಕಡಿಮೆಯಾಗುವ “ಸೂರ್ಯಾವರ್ತ” ಎಂಬ ತಲೆನೋವಿನಲ್ಲಿಯೂ ಇದನ್ನು ಉಪಯೋಗಿಸಲಾಗುತ್ತದೆ. ಸ್ವಚ್ಚ ಮಾಡಿದ ನೀರುರಹಿತ ಎಲೆಯನ್ನು ಜಜ್ಜಿ ರಸ ತೆಗೆದು 4-6 ಬಿಂದು ಎರಡು ಮೂಗಿನ ಹೊಳ್ಳೆಗಳಿಗೆ ದಿನಕ್ಕೆ ಒಂದು ಸಲ ಒಂದು ವಾರ ಬಿಡಬೇಕು ಅಥವಾ ರಸಕ್ಕೆ ಸ್ವಲ್ಪ ಒಳ್ಳೆ ಮೆಣಸಿನ ಪುಡಿ ಸೇರಿಸಿ ಸೋಸಿ ಮೂಗಿಗೆ ಬಿಡುವುದರಿಂದಲೂ ಮೂಗಿನ ಒಳಗಿನಿಂದ ನೀರು, ಕಫ ಹೊರಬರುವುದು ನಂತರ ತಲೆನೋವು ಕಡಿಮೆಯಾಗುವುದು. ಈ ಡ್ರಾಪ್ಸ್ ಹಾಕುವಾಗ ತುಂಬಾ ಉರಿಯಾಗುವುದು. ಸಹಿಸಿಕೊಳ್ಳುವಷ್ಟು ಸಹನೆ ಇದ್ದರೆ ಇದು ಉತ್ತಮ ಔಷಧಿ.  

ಕೆಮ್ಮು:

ಕಫ ಬರುವ ಕೆಮ್ಮು ಇರುವಾಗ ಇದರ ಎಲೆ ರಸಕ್ಕೆ ಜೇನು ಅಥವಾ ಶಾಂತಿ ಕಾಯಿ ಸಿಪ್ಪೆ ಪುಡಿ ಸೇರಿಸಿ ಮೂರು ದಿನ 2-3 ಸಲ ಕುಡಿಯಬೇಕು. ಹಳೆಯ ಹುಣ್ಣುಗಳನ್ನು ತೊಳೆಯಲು ಇದರ ಕಷಾಯವನ್ನು ಮಾಡಿ ಉಪಯೋಗಿಸಬಹುದು. ಇದರಿಂದ ಹುಣ್ಣು ಬೇಗ ಒಣಗುವುದು. ಗಂಟುನೋವುಗಳಿರುವಾಗ ಎಲೆ ರಸಕ್ಕೆ ಶುಂಠಿ ಪುಡಿ ಸೇರಿಸಿ ಕುಡಿಯುವುದರಿಂದಲೂ ನೋವು ಕಡಿಮೆಯಾಗುವುದು. ಶೀತ ಇರುವಾಗಲೂ ಇದರ ಎಲೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಕುದಿಯುವ ನೀರು ಹಾಕಿ ಮುಚ್ಚಿಟ್ಟು ತಣಿದ ನಂತರ ಸೋಸಿ ಕುಡಿಯುವುದರಿಂದ ಶೀತ ಕಡಿಮೆಯಾಗುವುದು.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.